ಪ್ರಮಾಣ ನಿರ್ಧರಣ - 
 	ಕೈಗಾರಿಕೆಗಳಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತುಗಳ ಮುಖ್ಯ ಘಟಕಗಳನ್ನು ವಿಶ್ಲೇಷಣಾತ್ಮಕವಾಗಿ ನಿರ್ಧರಿಸುವುದು (ಅಸ್ಸೇ). ಹಲಬಗೆಯ ವಿಧಾನಗಳು ಬಳಕೆಯಲ್ಲಿವೆ. ರಸವಾದಿಗಳು ಮತ್ತು ಅಕ್ಕಸಾಲಿಗರು ಪ್ರಶಸ್ತ ಲೋಹಗಳನ್ನು ಉತ್ಪತ್ತಿ ಮಾಡುವುದಕ್ಕೆ ಬಹಳ ಶ್ರಮಿಸುತ್ತಿದ್ದಾಗ ಪ್ರಮಾಣ ನಿರ್ಧರಣ ಅವಶ್ಯಕ ಪ್ರಕ್ರಿಯವಾಗಿತ್ತು.

	ರಾಸಾಯನಿಕ ಪ್ರಮಾಣ ನಿರ್ಧರಣ ವಿಧಾನಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು: ಶುಷ್ಕ (ಡ್ರೈ) ವಿಧಾನ. ಆದ್ರ್ರ (ವೆಟ್) ವಿಧಾನ. ಶುಷ್ಕ ವಿಧಾನದಲ್ಲಿ ಅದುರನ್ನು ಯೋಗ್ಯ ಸ್ರಾವಕ ವಸ್ತುಗಳೊಡನೆ ಬೆರೆಸಿ ಕರಗಿಸಲಾಗುತ್ತದೆ. ಆಗ ಅದುರು ಅಪಕರ್ಷಣ ಹೊಂದಿ ಲೋಹ ಪರಿಶುದ್ಧ ಸ್ಥಿತಿಯಲ್ಲಿ ದೊರೆಯುತ್ತದೆ. ಆದ್ರ್ರ ವಿಧಾನದಲ್ಲಿ ಕೆಲವು ಪರೀಕ್ಷಕ ದ್ರವ್ಯಗಳನ್ನು ಉಪಯೋಗಿಸುತ್ತಾರೆ. ಪರೀಕ್ಷಕ ದ್ರವ್ಯಗಳೊಡನೆ ವರ್ತಿಸಿದಾಗ ಮೊದಲು ಲೋಹದ ಲವಣಗಳ ದ್ರಾವಣಗಳು ಉತ್ಪತ್ತಿಯಾಗುತ್ತವೆ. ಆಮೇಲೆ ಲವಣಗಳನ್ನು ಪ್ರಕ್ಷೇಪಗಳಾಗಿ ಪಡೆಯುವರು. ಲಭ್ಯ ಲೋಹಗಳನ್ನು ತೂಕಮಾಡಿ ಅಥವಾ ಆ ದ್ರಾವಣಗಳ ತೀಕ್ಷ್ಣತೆಯನ್ನು ಬೇರೆ ಪ್ರಮಾಣಗಳ ದರ್ಜೆಗೆ ಹೋಲಿಸಿ ತೀಕ್ಷ್ಣತೆಯನ್ನು ಗಣಿಸುತ್ತಾರೆ. ಆ ದ್ರಾವಣದಲ್ಲಿ ಇಷ್ಟೇ ಲೋಹವಿದೆ ಎಂದು ಬಳಿಕ, ಲೆಕ್ಕ ಹಾಕಿಕೊಳ್ಳಬಹುದು. ಒಂದು ಅಥವಾ ಹೆಚ್ಚಿನ ತೀಕ್ಷ್ಣ ಘಟಕಗಳೊಡನೆ ನಿಷ್ಕ್ರಿಯ ದ್ರವಗಳು, ಬಂಧಕ ಇನ್ನೂ ಮುಂತಾದವು ಔಷಧ ವಸ್ತುಗಳಲ್ಲಿ ಸೇರಿಕೊಂಡಿರುತ್ತವೆ. ಪರಿಷ್ಕರಿಸಿದ ಉತ್ಪನ್ನಗಳನ್ನು ಪ್ರಮಾಣ ನಿರ್ಧರಣ ಮಾಡಿ ಅವುಗಳಲ್ಲಿ ನಮೂದಿಸಿದ ಪರಿಮಾಣಗಳಷ್ಟು ತೀಕ್ಷ್ಣ ಘಟಕಗಳು ಇವೆಯೇ ಇಲ್ಲವೇ ಎಂದು ನಿರ್ಧರಿಸುತ್ತಾರೆ.

	ಜೈವಿಕ ಪ್ರಮಾಣ ನಿರ್ಧರಣಕ್ಕೆ.			 (ನೋಡಿ- ಜೈವಿಕ-ಪ್ರಮಾಣ-ನಿಷ್ಕರ್ಷೆ)
(ಆರ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ